ಭಾರತವು 2030ರ ವೇಳೆಗೆ 500 GW ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಸೇರಿದಂತೆ ಪಳೆಯುಳಿಕೆರಹಿತ ಇಂಧನ ಅಂದರೆ ನೈಸರ್ಗಿಕವಾಗಿ ಸೌರ, ಪವನ ವಿದ್ಯುತ್ ಸೇರಿದಂತೆ ಇಂಧನ ಸಾಮರ್ಥ್ಯ ಸಾಧಿಸುವ ಗುರಿಯತ್ತ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು ಹೊಸ ಸವಾಲು ಎದುರಿಸುತ್ತಿದೆ. ರಾಜ್ಯದ ಬಯಲು ಸೀಮೆಯ ಪ್ರದೇಶಗಳಲ್ಲಿ ಸೌರ ಮತ್ತು ಪವನ ವಿದ್ಯುತ್ ಸಾಮರ್ಥ್ಯ ಹೆಚ್ಚುತ್ತಿದ್ದರೂ, ಅದನ್ನು ಸಮರ್ಪಕವಾಗಿ ಬಳಸಲು, ಸಾಗಿಸಲು ಅಗತ್ಯವಿರುವ ಪ್ರಸರಣ ಜಾಲ ಮತ್ತು ಶೇಖರಣಾ ವ್ಯವಸ್ಥೆಗಳು ಅದೇ ವೇಗದಲ್ಲಿ ಅಭಿವೃದ್ಧಿಯಾಗದಿರುವುದು ಸಮಸ್ಯೆ ಮತ್ತು ಹಿನ್ನಡೆಗೆ ಕಾರಣವಾಗಿದೆ.
ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 26.9 ಗಿ.ವಾ.ಗಿಂತ ಹೆಚ್ಚಿದ್ದು, ಗರಿಷ್ಠ ಉತ್ಪಾದನಾ ಅವಧಿಯಲ್ಲಿ ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶುದ್ಧ ಇಂಧನದ ಪಾಲು ಹಲವು ಬಾರಿ ಶೇ.50ರ ಗಡಿ ದಾಟುತ್ತದೆ. ತುಮಕೂರು ಜಿಲ್ಲೆಯ 2,050 MW ಪಾವಗಡ ಸೌರ ಉದ್ಯಾನ ಈ ಯಶಸ್ಸಿನ ಪ್ರಮುಖ ಉದಾಹರಣೆ.
ಯಶಸ್ಸಿನ ಬಳಿಕ ಎದುರಾದ ಹೊಸ ಸಮಸ್ಯೆ
ಹಗಲು ವೇಳೆಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಾದಾಗ ರಾಜ್ಯದ ಸ್ಥಳೀಯ ಬೇಡಿಕೆಗಿಂತ ಪೂರೈಕೆ ಹೆಚ್ಚಾಗುತ್ತದೆ. ಹೆಚ್ಚುವರಿ ವಿದ್ಯುತ್ ಅನ್ನು ಉತ್ತರ ಮತ್ತು ಪೂರ್ವ ಭಾರತದ ವಿದ್ಯುತ್ ಕೊರತೆ ಇರುವ ಪ್ರದೇಶಗಳಿಗೆ ಕಳುಹಿಸಲು ಅಂತರರಾಜ್ಯ ವಿದ್ಯುತ್ ಪ್ರಸರಣ ಮಾರ್ಗಗಳ ವ್ಯವಸ್ಥೆ ಅತ್ಯಗತ್ಯ. ಆದರೆ ಕೆಲವು ಪ್ರಮುಖ ಪ್ರಸರಣ ಕಾರಿಡಾರ್‌ಗಳಲ್ಲಿ ದಟ್ಟಣೆ ಉಂಟಾಗುತ್ತಿರುವುದರಿಂದ, ಉತ್ಪಾದಿಸಿದ ಸಂಪೂರ್ಣ ಹಸಿರು ವಿದ್ಯುತ್ತನ್ನು ಗ್ರಿಡ್‌ಗೆ ಸೇರಿಸುವಲ್ಲಿ ಸಮಸ್ಯೆ ಎದುರಾಗುತ್ತಿದೆ. ಇಂತಹ ಸಮಸ್ಯೆಯ ಪರಿಣಾಮವಾಗಿ ಕೆಲವು ಸಂದರ್ಭಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯನ್ನು ಕಡಿತಗೊಳಿಸುವ—ಗ್ರಿಡ್ ಕರ್ಟೇಲ್‌ಮೆಂಟ್—ಪರಿಸ್ಥಿತಿ ಎದುರಾಗುತ್ತಿದೆ.
ಇದೇ ವೇಳೆ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಸೂಕ್ತವಾದ ತುಮಕೂರು, ಚಿತ್ರದುರ್ಗ ಮತ್ತು ಬಳ್ಳಾರಿ ಸೇರಿದಂತೆ ಹಲವು ಭೂಪ್ರದೇಶಗಳಲ್ಲಿ ಹೊಸ ಯೋಜನೆಗಳಿಗೆ ಅವಕಾಶವೂ ಕ್ರಮೇಣ ಸೀಮಿತವಾಗುತ್ತಿದೆ. ಹೀಗಾಗಿ ಕೇವಲ ಹೊಸ ಸೌರ–ಪವನ ಯೋಜನೆಗಳನ್ನು ಸ್ಥಾಪಿಸುವುದರಿಂದ ಮುಂದಿನ ಹಂತದ ಬೆಳವಣಿಗೆ ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ಪ್ರಸರಣ ಮಾರ್ಗಗಳು, ಗ್ರಿಡ್ ಗಳು ಅಭಿವೃದ್ಧಿ ಹೊಂದಬೇಕಿವೆ.
ಕರ್ನಾಟಕವಷ್ಟೇ ಅಲ್ಲದೆ ಇತರ ರಾಜ್ಯಗಳಲ್ಲೂ ವಿಭಿನ್ನ ಸವಾಲುಗಳು ಎದುರಾಗುತ್ತಿವೆ.
ಮಹಾರಾಷ್ಟ್ರವು 32 GW ಮೀರಿದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿದ್ದರೂ, ಕೈಗಾರಿಕಾ ಪ್ರದೇಶಗಳಲ್ಲಿನ ಭೂಮಿಯ ದುಬಾರಿ ದರ ಮತ್ತು ಮಹಾರಾಷ್ಟ್ರದ ವಿದ್ಯುತ್ ವಿತರಣಾ ಸಂಸ್ಥೆಯ ಆರ್ಥಿಕ ಒತ್ತಡಗಳು ಹಸಿರು ಇಂಧನ ಕ್ಷೇತ್ರದ ಸವಾಲಾಗಿವೆ. ಆಂಧ್ರ ಪ್ರದೇಶದಲ್ಲಿ ಸೌರ ಮತ್ತು ಪವನ ಯೋಜನೆಗಳ ವೇಗಕ್ಕೆ ನಿಯಂತ್ರಣಾತ್ಮಕ ಸ್ಥಿರತೆ ಹಾಗೂ ಹಳೆಯ ವಿದ್ಯುತ್ ಖರೀದಿ ಒಪ್ಪಂದಗಳ (PPA) ಕುರಿತ ವಿವಾದಗಳು ಪರಿಣಾಮ ಬೀರಿವೆ. ದೀರ್ಘಾವಧಿಯ ಇಂಧನ ಯೋಜನೆಗಳಿಗೆ ನೀತಿ ಮತ್ತು ಒಪ್ಪಂದಗಳ ಸ್ಥಿರತೆ ಎಷ್ಟು ಮುಖ್ಯ ಎನ್ನುವುದು ಇಲ್ಲಿ ಪರಿಣಾಮ ಬೀರುತ್ತದೆ.
ಭಾರತದ ಈಶಾನ್ಯರಾಜ್ಯಗಳಲ್ಲಿ ಪರಿಸರ, ಭೌಗೋಳಿಕ ವ್ಯವಸ್ಥೆ, ಪ್ರಸರಣ ಮೂಲಸೌಕರ್ಯದ ಕೊರತೆ ಮತ್ತು ಪ್ರವಾಹದಂತಹ ನೈಸರ್ಗಿಕ ಸವಾಲುಗಳಿಂದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಇನ್ನೂ ಕಡಿಮೆ ಮಟ್ಟದಲ್ಲಿದೆ.
ಹಸಿರು ಇಂಧನ ಕ್ಷೇತ್ರದಲ್ಲಿ 2030ರ ಬೆಳಗ್ಗೆ 500 ಗಿಗಾ ವ್ಯಾಟ್ ಗುರಿಯನ್ನು ತಲುಪಲು ಭಾರತದ ಯೋಜನೆ ಇದೆ. ಆದರೆ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆ ಯೊಂದಿಗೆ ಈ ಗುರಿ ತಲುಪಲು ಪ್ರಸರಣ ಮಾರ್ಗಗಳು–ಶೇಖರಣೆಯೇ ಕೀಲಿಕೈ ಗಳಾಗಿವೆ. ಸೌರ ಮತ್ತು ಪವನ ವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ತುಸು ಕಡಿಮೆ ಅವಧಿ ಸಾಕಾದರೂ, ಅವುಗಳಿಂದ ಇಂಧನ ವರ್ಗಾವಣೆ , ಸಂಪರ್ಕ ಕಲ್ಪಿಸಲು ಅಗತ್ಯವಿರುವ ಅಂತರರಾಜ್ಯ ಪ್ರಸರಣ ಮಾರ್ಗಗಳ ನಿರ್ಮಾಣಕ್ಕೆ ಹಲವು ವರ್ಷಗಳು ಬೇಕಾಗಬಹುದು. ಈ ಸಮಯದ ಅಂತರವೇ ಮುಂದಿನ ದಿನಗಳಲ್ಲಿ ದೊಡ್ಡ ಅಡಚಣೆಯಾಗುವ ಸಾಧ್ಯತೆಯಿದೆ.
ಭಾರತದ 500 GW ಗುರಿ ಸಾಧನೆಗೆ ಸೌರ ಫಲಕಗಳು ಮತ್ತು ಪವನ ವಿದ್ಯುತ್ ಘಟಕಗಳ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಸಾಕಾಗುವುದಿಲ್ಲ. ಉತ್ಪಾದನೆಯಾಗುವ ವಿದ್ಯುತ್ ಅನ್ನು ಅಗತ್ಯವಿರುವ ಪ್ರದೇಶಗಳಿಗೆ ತಲುಪಿಸುವಷ್ಟು ಬಲಿಷ್ಠ ಪ್ರಸರಣ ಜಾಲ ಹಾಗೂ ಬೇಡಿಕೆ ಕಡಿಮೆ ಇರುವ ಅವಧಿಯ ವಿದ್ಯುತ್ ಅನ್ನು ಸಂಗ್ರಹಿಸುವ ಶೇಖರಣಾ ಸಾಮರ್ಥ್ಯವೂ ಅಗತ್ಯ.
ಆದ್ದರಿಂದ ಹಸಿರಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಂತಹ ರಾಜ್ಯಗಳಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS), ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗಳು (PSP) ಮತ್ತು ವೇಗವರ್ಧಿತ ಹಸಿರು ಇಂಧನ ಕಾರಿಡಾರ್, ಪ್ರಸರಣ ಮಾರ್ಗಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ.
ಕರ್ನಾಟಕದ ಹಸಿರು ಇಂಧನ ಯಶಸ್ಸು ಇದೀಗ ಹೊಸ ಪರೀಕ್ಷೆಯ ಹಂತದಲ್ಲಿದೆ. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ‘ಹಸಿರು ವಿದ್ಯುತ್’ ಸೃಷ್ಟಿಯಾಗಬಹುದು; ಆದರೆ ಅದನ್ನು ದೇಶದ ಬೇರೆ ಭಾಗಗಳಿಗೆ ತಲುಪಿಸುವ ಪ್ರಸರಣ ಜಾಲ ಮತ್ತು ಸಂಗ್ರಹಿಸುವ ವ್ಯವಸ್ಥೆ ನಿರ್ಮಾಣವಾದಾಗ ಮಾತ್ರ 500 GW ಗುರಿ ನಿಜವಾದ ಇಂಧನ ಪರಿವರ್ತನೆಯಾಗಿ ರೂಪುಗೊಳ್ಳಲಿದೆ.
ಅಜಯ್ ಎಸ್. ಜಸ್ರಾ,
ಲೇಖಕರು ಮತ್ತು ಸಲಹೆಗಾರರು,
ಗ್ರಾಮೀಣ ಕ್ಷೇತ್ರ (Rural Advocacy)