Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಪರ–ವಿರುದ್ಧಗಳ ನಡುವೆ ಸತ್ಯದ ಹುಡುಕಾಟ: ಪ್ರಚಾರವೇ, ವಾಸ್ತವವೇ?

ಪರ–ವಿರುದ್ಧಗಳ ನಡುವೆ ಸತ್ಯದ ಹುಡುಕಾಟ: ಪ್ರಚಾರವೇ, ವಾಸ್ತವವೇ?

ಇತ್ತೀಚಿನ ದಿನಗಳಲ್ಲಿ ಭಾರತೀಯ ಸಮಾಜವು “ಪರ” ಮತ್ತು “ವಿರುದ್ಧ” ಎಂಬ ಎರಡು ತುದಿಗಳ ನಡುವೆ ಹೆಚ್ಚು ಹೆಚ್ಚು ಸಿಲುಕುತ್ತಿರುವುದನ್ನು ಕಾಣಬಹುದು. ವ್ಯವಹಾರ, ಸಿನಿಮಾ, ರಾಜಕೀಯ—ಎಲ್ಲ ಕ್ಷೇತ್ರಗಳಲ್ಲೂ ಈ ವಿಭಜನೆಯ ತಂತ್ರ ಉದ್ದೇಶಪೂರ್ವಕವಾಗಿ ಬಳಸಲಾಗುತ್ತಿದೆಯೇ? ಅಥವಾ ಅನ್ಯಾಯಗಳು ನಿಜಕ್ಕೂ ಇಲ್ಲಿ ನಡೆದಿದೆಯೇ ? ಎಂಬ ಪ್ರಶ್ನೆ ಸಾಮಾನ್ಯ ನಾಗರಿಕನ ಮನಸ್ಸಿನಲ್ಲಿ ಮೂಡುತ್ತಿದೆ.

ಈ ಚರ್ಚೆಯ ಹಿನ್ನೆಲೆಗೆ ಬಂದಾಗ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಹೇಳಿಕೆ ಮತ್ತು ಅದಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳ ವಿಚಾರವೂ ಗಮನಕ್ಕೆ ಬರುತ್ತದೆ. ಆದರೆ ಈ ಲೇಖನ ಆ ಘಟನೆಯ ಸುತ್ತ ಮಾತ್ರ ಸೀಮಿತವಾಗುವುದಿಲ್ಲ. ಬದಲಾಗಿ, ಅತಿರೇಕವಿಲ್ಲದ ಮಧ್ಯಮ ಮಾರ್ಗದಲ್ಲಿ ನಿಂತು, ಎರಡು ಪಾಳಯಗಳ ವಾದ–ಪ್ರತಿವಾದಗಳು ಮತ್ತು ಅದರ ಹಿಂದೆ ಇರುವ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದಾಗಿದೆ.

ಒಮ್ಮೆ ಪೆಪ್ಸಿ ಮತ್ತು ಕೋಕಾಕೋಲಾ ಜಾಹೀರಾತುಗಳನ್ನು ನೆನಪಿಸಿಕೊಂಡರೆ ಸಾಕು. ಒಂದರ ವಿರುದ್ಧ ಮತ್ತೊಂದು ನಿಂತಂತೆ, ಪರಸ್ಪರ ವ್ಯಂಗ್ಯಮಾಡುವ ಶೈಲಿಯಲ್ಲಿ ಜಾಹೀರಾತುಗಳು ಪ್ರಸಾರವಾಗುತ್ತಿದ್ದವು. ಇದರಿಂದ ಜನರಲ್ಲಿ ಭಾರೀ ಕುತೂಹಲ ಮತ್ತು ‘ಹೈಪ್’ ಹುಟ್ಟಿತು. ಆದರೆ ಆ ಎರಡು ಕಂಪನಿಗಳ ಮೂಲ ಉದ್ದೇಶ ಒಂದೇ—ತಮ್ಮ ಉತ್ಪನ್ನಗಳನ್ನು ಹೆಚ್ಚು ಮಾರಾಟ ಮಾಡುವುದು. ಇಲ್ಲಿ ಪರ–ವಿರುದ್ಧದ ಸಂಘರ್ಷವೇ ಒಂದು ಮಾರ್ಕೆಟಿಂಗ್ ತಂತ್ರವಾಗಿತ್ತು.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಇದೇ ಮಾದರಿ ರಾಜಕೀಯದಲ್ಲೂ ಸ್ಪಷ್ಟವಾಗಿ ಕಾಣುತ್ತದೆ. “ನಾವು ಹಿಂದೂತ್ವದ ಪರ”, “ನಾವು ಅಲ್ಪಸಂಖ್ಯಾತರ ಪರ”, “ಅವರು ಸಂವಿಧಾನ ವಿರೋಧಿಗಳು”, “ನಾವು ಸಂವಿಧಾನ ರಕ್ಷಕರು” ಎಂಬ ಘೋಷಣೆಗಳು ಜನರ ಮನಸ್ಸಿನಲ್ಲಿ ಭಾವನಾತ್ಮಕ ವಿಭಜನೆಯನ್ನು ಉಂಟುಮಾಡುತ್ತವೆ. ಇದರ ಅಂತಿಮ ಗುರಿ ಮತಗಳ ಸಂಗ್ರಹ ಮತ್ತು ಅಧಿಕಾರದ ಹಿಡಿತ. ಸತ್ಯ ಎಷ್ಟು ?, ಪ್ರಚಾರ ಎಷ್ಟು? ಎಂಬುದನ್ನು ಗುರುತಿಸುವುದು ಸಾಮಾನ್ಯ ನಾಗರಿಕನಿಗೆ ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ.

ದೇಶದಲ್ಲಿ ದೊಡ್ಡ ಮತ್ತು ಪ್ರಬಲ ರಾಜಕೀಯ ಪಕ್ಷಗಳು ತಮ್ಮ ಪ್ರಭಾವವನ್ನು ಎಲ್ಲ ಕ್ಷೇತ್ರಗಳಲ್ಲೂ ತೋರಿಸಲು ಇಂತಹ ಆಟಗಳನ್ನು ಆಡುತ್ತವೆಯೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ನಿಜವಾದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಂಬಿಕೊಂಡು ನಡೆಯುವ ಜನರಿಗೆ,ಅಥವಾ ಸಂಘಟನೆ, ಪಕ್ಷಗಳಿಗೆ ಈ ಪ್ರಬಲ ಪಕ್ಷಗಳ ರಾಜಕೀಯ ಆಟಗಳು ಮತ್ತು ಫೇಕ್‌ ನ್ಯಾರೇಟಿವ್‌ಗಳಿಂದ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದೂ ಕಟುವಾದ ಸತ್ಯ.

ಸಿನಿಮಾ ಕ್ಷೇತ್ರದಲ್ಲೂ ಇದೇ ತಂತ್ರ ಮರುಕಳಿಸುತ್ತದೆ. ಒಂದು ಸಿನಿಮಾ ಒಂದು ಧರ್ಮದ ಪರವಾಗಿದ್ದರೆ ಇನ್ನೊಂದು ಧರ್ಮಿಯ ಸಂಘಟನೆಗಳು ವಿರೋಧಕ್ಕೆ ಇಳಿಯುತ್ತವೆ. ಅದಕ್ಕೆ ಪ್ರತಿಯಾಗಿ ಇನ್ನಷ್ಟು ಸಂಘಟನೆಗಳು ಆ ಸಿನಿಮಾದ ಪರ ನಿಲ್ಲುತ್ತವೆ. ಕೆಲವೊಮ್ಮೆ ಧರ್ಮದ ಅಜೆಂಡಾ ಎಂಬ ಹೆಸರಿನಲ್ಲಿ ಸಿನಿಮಾಗಳನ್ನು ಬೆಂಬಲಿಸಲಾಗುತ್ತದೆ. ಅದನ್ನು ಉಳಿದವರು ವಿರೋಧಿಸುತ್ತಾರೆ. ಎಲ್ಲ ಪರ–ವಿರುದ್ಧ ಚರ್ಚೆಗಳ ನಡುವೆ ಕೊನೆಗೆ ಲಾಭ ಪಡೆಯುವುದು ಸಿನಿಮಾ ನಿರ್ಮಾಪಕರೇ ಎಂಬ ವಾದವೂ ಕೇಳಿಬರುತ್ತಿದೆ.

ಹೀಗಾಗಿ ಪ್ರಶ್ನೆ ಒಂದೇ—ಇವೆಲ್ಲವೂ ಪ್ರೋಪಗಂಡಾನಾ? ಅಥವಾ ಸಮಾಜದಲ್ಲಿ ಅನ್ಯಾಯಗಳು ನಿಜಕ್ಕೂ ಇಲ್ಲಿ ನಡೆದಿತ್ತಾ ? ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ನಿರ್ಧರಿಸುವುದು ಇಂದು ಅತ್ಯಂತ ಕಷ್ಟಕರವಾಗಿದೆ. ಭಾವನಾತ್ಮಕವಾಗಿ ವಿಭಜಿತವಾಗುತ್ತಿರುವ ಸಮಾಜದಲ್ಲಿ, ವಿವೇಕಬುದ್ಧಿಯಿಂದ ವಿಚಾರಿಸುವ ಮನೋಭಾವ ಅತ್ಯಾವಶ್ಯಕವಾಗಿದೆ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಪರ–ವಿರುದ್ಧಗಳ ನಡುವೆಯೇ ಸಿಲುಕದೇ, ಅತಿರೇಕವಿಲ್ಲದ ಮಧ್ಯಮ ಮಾರ್ಗವನ್ನು ಹುಡುಕುವ ಚಿಂತನೆ ಇಂದಿನ ಭಾರತದ ಅಗತ್ಯವಾಗಿದೆ. ಇಲ್ಲವಾದರೆ, ಸತ್ಯಕ್ಕಿಂತ ಪ್ರಚಾರವೇ ದೊಡ್ಡದಾಗಿ ಕಾಣಿಸುವ ಅಪಾಯ ನಮ್ಮೆದುರು ನಿಂತಿದೆ.

-ಪ್ರಜಾಪರ ನ್ಯೂಸ್

😀
0
😍
0
😢
0
😡
0
👍
2
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading