ಮಂಗಳೂರು: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ನಡುವೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾರ್ಯದರ್ಶಿ ಸಿ.ಹೆಚ್. ಮೋಹನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಮಹಿಳಾ ಡಿ-ಗ್ರೂಪ್ ಉದ್ಯೋಗಿಗೆ ಪದೇಪದೇ ಕಿರುಕುಳ ನೀಡುತ್ತಿದ್ದು, “ಸೋಮವಾರ ಹಸಿರು ಸೀರೆ ಧರಿಸಿ ಕಚೇರಿಗೆ ಬನ್ನಿ” ಎಂದು ಸೂಚನೆ ನೀಡಿದ್ದರು ಎನ್ನಲಾಗಿದೆ.
ಈ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬಂದ ತಕ್ಷಣ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ನೇತೃತ್ವದಲ್ಲಿ ಮಹಿಳೆಯರ ತಂಡ ಹಸಿರು ಸೀರೆ ಧರಿಸಿ ಎಪಿಎಂಸಿ ಕಚೇರಿಗೆ ಭೇಟಿ ನೀಡಿ ಪ್ರತಿಭಟನೆ ನಡೆಸಿತು. ಆರೋಪ ಎದುರಿಸುತ್ತಿರುವ ಅಧಿಕಾರಿಯನ್ನು ಪ್ರಶ್ನಿಸಿದ ತಂಡ, “ಮಹಿಳಾ ಸಿಬ್ಬಂದಿಗೆ ಹಸಿರು ಸೀರೆ ಧರಿಸಿ ಬರಲು ಹೇಳಿದ್ದೀರಲ್ಲ, ನಾವೆಲ್ಲರೂ ಹಸಿರು ಸೀರೆ ಧರಿಸಿ ಬಂದಿದ್ದೇವೆ. ಅದರ ಅರ್ಥವೇನು?” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಸಿಬ್ಬಂದಿಗೆ ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ಪಣಂಬೂರು ಎಸಿಪಿಗೆ ಲಿಖಿತ ದೂರು ಸಲ್ಲಿಸಿದ್ದು, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಘಟನೆ ಮಂಗಳೂರಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಯ ಸುರಕ್ಷತೆ ಹಾಗೂ ಗೌರವಯುತ ಕಾರ್ಯಸ್ಥಳದ ಅಗತ್ಯತೆಯ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಸ್ತುತ ಪ್ರಕರಣದ ತನಿಖೆ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿದ್ದು, ತನಿಖೆಯ ಬಳಿಕ ಆರೋಪಗಳ ಸತ್ಯಾಸತ್ಯತೆ ಮತ್ತು ಪ್ರಕರಣದ ಸಂಪೂರ್ಣ ವಿವರಗಳು ಬಹಿರಂಗವಾಗಲಿವೆ. ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳದ ಆರೋಪ ಗಂಭೀರ ಸ್ವರೂಪದ್ದಾಗಿರುವುದರಿಂದ, ತನಿಖಾ ವರದಿಗೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಕಾತರದಿಂದ ಕಾಯುತ್ತಿವೆ.