ಮಂಗಳೂರು, ಜು. 19: ಕಡಲ್ ಮಾಯಿಲ್ ಫಿಲ್ಮ್, ಕಡಲ್ ಸ್ಟುಡಿಯೋಸ್ ಹಾಗೂ ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್ (ರಿ) ಸಹಭಾಗಿತ್ವದಲ್ಲಿ ಆಯೋಜಿಸಲಾದ ‘ಕಂಗುಲು–ಕರ್ಂಗೋಲು’ (ಮೂಲನಿವಾಸಿ ಆಚರಣೆ) ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ‘ಕುದ್ಕಬಚ್ಚಿರೆ’ ತುಳು ಕಿರುಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ನಂತೂರಿನ ಸಂದೇಶ ಫೌಂಡೇಶನ್ ಫಾರ್ ಎಜುಕೇಶನ್ (ರಿ) ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಜನಪದ ಮತ್ತು ರಂಗಭೂಮಿ ಕಲಾವಿದ ಶೀನಾ ನಾಡೋಳಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂದೇಶ ಫೌಂಡೇಶನ್ ನಿರ್ದೇಶಕ ಫಾ. ರೋಶನ್ ರೋಸರಿಯೋ ಹಾಗೂ ತುಳು ಸಾಹಿತಿ ಅತ್ರಾಡಿ ಅಮೃತಾ, ವಿವಿಧ ಲೇಖಕರ ಕೃತಿಗಳನ್ನು ಒಳಗೊಂಡಿರುವ ‘ಕುದ್ಕಬಚ್ಚಿರೆ’ ತುಳು ಕಿರುಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ‘ಕಂಗುಲು–ಕರ್ಂಗೋಲು’ ಸಾಕ್ಷ್ಯಚಿತ್ರ ವೀಕ್ಷಿಸಿದ ತುಳು ಜನಪದ ವಿದ್ವಾಂಸರಾದ ಡಾ. ವಾಸುದೇವ ಬೆಳ್ಳೆ, ಡಾ. ಯದುಪತಿ ಗೌಡ, ಕೆ.ಕೆ. ಪೇಜಾವರ ಹಾಗೂ ಪಾಂಗಳ ಬಾಬು ಕೊರಗ ಅವರು ತಮ್ಮ ವಿಶ್ಲೇಷಣಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಸಾಕ್ಷ್ಯಚಿತ್ರದ ಸಂಶೋಧನಾತ್ಮಕ ಹಾಗೂ ಸಾಂಸ್ಕೃತಿಕ ಮೌಲ್ಯವನ್ನು ಮೆಚ್ಚಿದರು. ಬಳಿಕ ನಡೆದ ಸಂವಾದದಲ್ಲಿ ಸಾಕ್ಷ್ಯಚಿತ್ರ ತಂಡದ ಸೃಜನಶೀಲ ಸಾಧನೆ ಕುರಿತು ಪ್ರಶಂಸೆಯ ಮಾತುಗಳು ಕೇಳಿಬಂದವು.
ಈ ಸಂದರ್ಭದಲ್ಲಿ ಕಥಾ ಸ್ಪರ್ಧೆಯ ಆಯ್ದ ವಿಜೇತರಿಗೆ ಹಾಗೂ ಮೆಚ್ಚುಗೆ ಪಡೆದ ಕತೆಗಾರರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾಕ್ಷ್ಯಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಾದ ಸಾಗರ್ ಬನ್ನಂಜೆ ಮತ್ತು ಜಯಂತ್ ನಿಟ್ಟಡೆ ತಮ್ಮ ಅನುಭವಗಳು ಮತ್ತು ಯೋಜನೆಯ ಹಿನ್ನೆಲೆಯನ್ನು ಹಂಚಿಕೊಂಡರು.
ಸಾಗರ್ ಸ್ಟುಡಿಯೋಸ್ ಮತ್ತು ಮಾಯಿಲ್ ಫಿಲ್ಮ್ಸ್ನ ಜಂಟಿ ಪ್ರಯತ್ನದಲ್ಲಿ ಮೂಡಿಬಂದಿರುವ ‘ಕಂಗುಲು–ಕರ್ಂಗೋಲು’ ಸಾಕ್ಷ್ಯಚಿತ್ರವು ಎರಡು ಮೂಲನಿವಾಸಿ ಸಮುದಾಯಗಳು ಉಳಿಸಿಕೊಂಡು ಬಂದಿರುವ ಸಾಂಸ್ಕೃತಿಕ, ಸಾಂಪ್ರದಾಯಿಕ ಹಾಗೂ ಜನಪದ ಆಚರಣೆಗಳ ಸಾಮ್ಯತೆ ಮತ್ತು ವೈಶಿಷ್ಟ್ಯಗಳನ್ನು ಅಧ್ಯಯನಾತ್ಮಕವಾಗಿ ದಾಖಲಿಸಿದೆ. ಆರಾಧನಾ ಹಿನ್ನೆಲೆಯ ಈ ಆಚರಣೆಗಳ ಸೊಗಡನ್ನು ದೃಶ್ಯ ಮತ್ತು ಧ್ವನಿಗಳ ಮೂಲಕ ಪರಿಣಾಮಕಾರಿಯಾಗಿ ಸೆರೆಹಿಡಿದು ಪ್ರಸ್ತುತಪಡಿಸಿರುವುದು ವಿಶೇಷ ಗಮನ ಸೆಳೆದಿದೆ.
ಸಾಕ್ಷ್ಯಚಿತ್ರವನ್ನು ಸಾಗರ್ ಬನ್ನಂಜೆ ಹಾಗೂ ಜಯಂತ್ ನಿಟ್ಟಡೆ ನಿರ್ದೇಶಿಸಿದ್ದು, ಛಾಯಾಗ್ರಹಣ ಮತ್ತು ಸಂಕಲನ ಕಾರ್ಯದಲ್ಲಿ ಶಿಪಪ್ರಸಾದ್ ಮಣಿಪಾಲ ಮತ್ತು ಪ್ರದೀಪ್ ಗರ್ಡಾಡಿ ಸಹಕರಿಸಿದ್ದಾರೆ. ಅಧ್ಯಯನ ತಂಡದಲ್ಲಿ ಪದ್ಮಾವತಿ ಇಂದಬೆಟ್ಟು, ರೋಶನ್ ರೆಂಕೆದಗುತ್ತು ಹಾಗೂ ಅಭ್ಯುದಯ ಅರ್ವ ಸೇರಿದಂತೆ ಹಲವರು ಕಾರ್ಯನಿರ್ವಹಿಸಿದ್ದಾರೆ.
ಕಾರ್ಯಕ್ರಮವನ್ನು ಪೂರ್ಣಿಮಾ ಬಂಟ್ವಾಳ ನಿರೂಪಿಸಿದರು.