ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಉತ್ತರ ಪ್ರದೇಶದ ಏಕೈಕ ಶಾಸಕ ಉಮಾಶಂಕರ್ ಸಿಂಗ್ ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ಬುಧವಾರ ರಾತ್ರಿ ದೆಹಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಮೆದುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಹಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನವು ಬಿಎಸ್ಪಿಗೆ ದೊಡ್ಡ ರಾಜಕೀಯ ನಷ್ಟವಾಗಿದೆ.
ಗುರುವಾರ ಬೆಳಿಗ್ಗೆ ಉಮಾಶಂಕರ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಲಖನೌ ನಿವಾಸಕ್ಕೆ ತರಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಈ ವೇಳೆ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ತಮ್ಮ ಆಪ್ತ ನಾಯಕರನ್ನು ಕಳೆದುಕೊಂಡ ನೋವಿನಿಂದ ಅವರು ಭಾವುಕರಾಗಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮಾಯಾವತಿ ಮಾತನಾಡಿ, “ಉಮಾಶಂಕರ್ ಸಿಂಗ್ ನನ್ನನ್ನು ಸ್ವಂತ ಅಕ್ಕನಂತೆ ಗೌರವಿಸುತ್ತಿದ್ದರು. ಪ್ರತಿವರ್ಷ ರಕ್ಷಾಬಂಧನದಂದು ನನಗೆ ರಾಖಿ ಕಟ್ಟಲು ಬರುತ್ತಿದ್ದರು. ರಾಜಕೀಯದಲ್ಲಿ ಅನೇಕರು ನನ್ನನ್ನು ಬಿಟ್ಟರೂ, ಅವರು ಎಂದಿಗೂ ನಂಬಿಕೆಗೆ ದ್ರೋಹ ಮಾಡಲಿಲ್ಲ. ಅವರ ಪ್ರೀತಿ ಮತ್ತು ನಿಷ್ಠೆಯನ್ನು ನಾನು ಎಂದಿಗೂ ಮರೆಯುವುದಿಲ್ಲ,” ಎಂದು ಕಣ್ಣೀರಿಟ್ಟರು. ಅವರ ಕುಟುಂಬದವರು ಆಸಕ್ತಿ ತೋರಿದರೆ, ಪುತ್ರನಿಗೆ ರಾಜಕೀಯದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಉಮಾಶಂಕರ್ ಸಿಂಗ್ ಅವರು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ರಸರಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಜನಪ್ರಿಯ ಶಾಸಕರಾಗಿದ್ದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿಯಿಂದ ಗೆದ್ದ ಏಕೈಕ ಶಾಸಕರಾಗಿದ್ದ ಅವರು, ಪಕ್ಷದ ಪ್ರಮುಖ ಮುಖವಾಗಿದ್ದರು. ಅವರ ನಿಧನದಿಂದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಎಸ್ಪಿಯ ಪ್ರತಿನಿಧಿತ್ವ ಸಂಪೂರ್ಣವಾಗಿ ಅಂತ್ಯಗೊಂಡಿದೆ.