Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಬೀಜ ಮಸೂದೆ,ವಿದ್ಯುತ್ ಮಸೂದೆಗಳು ದೇಶದ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳಿಗೆ ಮಾರಕ – ಕೆ ಯಾದವ ಶೆಟ್ಟಿ

ಬೀಜ ಮಸೂದೆ,ವಿದ್ಯುತ್ ಮಸೂದೆಗಳು ದೇಶದ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳಿಗೆ ಮಾರಕ – ಕೆ ಯಾದವ ಶೆಟ್ಟಿ

ಮಂಗಳೂರು:ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಗಳು ಯೋಜನೆಗಳ ಮೂಲ ಉದ್ದೇಶವನ್ನೇ ಬುಡಮೇಲುಗೊಳಿಸಿ, ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಳಿಗೆ ಮಾತ್ರ ಆದ್ಯತೆ ನೀಡುತ್ತಿವೆ. ಇದರಿಂದ ದೇಶದ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳು ಸಂಪೂರ್ಣವಾಗಿ ಬಲಿ ಆಗುತ್ತಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ನಾಯಕರಾದ ಕೆ. ಯಾದವ ಶೆಟ್ಟಿ ತೀವ್ರ ಆತಂಕ ವ್ಯಕ್ತಪಡಿಸಿದರು.

ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಗಳ ವಿರುದ್ಧ ದೇಶಾದ್ಯಂತ ರೈತ–ಕಾರ್ಮಿಕರ ಒಗ್ಗಟ್ಟಿನಲ್ಲಿ ಪ್ರತಿರೋಧ ದಿನಾಚರಣೆ ನಡೆಸುವಂತೆ ಕರೆ ನೀಡಲಾಗಿದ್ದ ಹಿನ್ನೆಲೆಯಲ್ಲಿ, ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಜನವಿರೋಧಿ ನೀತಿಗಳ ವಿರುದ್ಧ ದೇಶದ ಸಮಸ್ತ ಜನತೆ ಒಂದಾಗಿ ಹೋರಾಡದಿದ್ದರೆ ದೇಶವನ್ನೇ ಉಳಿಸುವುದು ಕಷ್ಟಸಾಧ್ಯವಾಗಲಿದೆ ಎಂದು ಅವರು ಎಚ್ಚರಿಸಿದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜರ್ ಮಾತನಾಡಿ, ಈಗಾಗಲೇ ಹಲವು ಬೀಜ ಕಂಪೆನಿಗಳ ಕಳಪೆ ಗುಣಮಟ್ಟದ ಬೀಜಗಳಿಂದ ರೈತರು ಭಾರೀ ನಷ್ಟ ಅನುಭವಿಸಿದ್ದರೂ, ಅವರಿಗೆ ಇದುವರೆಗೆ ಸಮರ್ಪಕ ಬೆಳೆನಷ್ಟ ಪರಿಹಾರ ಸಿಕ್ಕಿಲ್ಲ. ಹೊಸ ಬೀಜ ಮಸೂದೆಯಲ್ಲಿಯೂ ರೈತರಿಗೆ ಪರಿಹಾರ ಪಡೆಯುವ ಅವಕಾಶವಿಲ್ಲದಂತೆ ಮಾಡಲಾಗಿದೆ. ಇದರಿಂದ ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಾರ್ವಜನಿಕ ವಲಯದಲ್ಲಿರುವ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಫೆಡರಲ್ ಸಂರಚನೆಗೆ ಗಂಭೀರ ಧಕ್ಕೆಯನ್ನು ನೀಡುತ್ತಿದೆ ಎಂದು ಹೇಳಿದರು. ಗೃಹ ಹಾಗೂ ಕೃಷಿ ಬಳಕೆಗೆ ಖಾಸಗಿ ಕಂಪೆನಿಗಳು ನಿಗದಿಪಡಿಸುವ ಅತಿಯಾದ ದರಗಳನ್ನು ಪಾವತಿಸುವ ಅನಿವಾರ್ಯತೆ ಉಂಟಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಸಬ್ಸಿಡಿಗಳನ್ನು ಹಂತಹಂತವಾಗಿ ಕೈಬಿಡುವ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆಯ ಮೂಲಕ ಮುಂಗಡ ಪಾವತಿಯನ್ನು ಕಡ್ಡಾಯಗೊಳಿಸಿ ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶ ಈ ಯೋಜನೆಯ ಹಿಂದೆ ಇದೆ ಎಂದು ಟೀಕಿಸಿದರು.

CITU ಜಿಲ್ಲಾ ಅಧ್ಯಕ್ಷ ಬಿ.ಎಂ. ಭಟ್ ಮಾತನಾಡಿ, ಗ್ರಾಮೀಣ ಜನತೆಯ ಬದುಕಿಗೆ ಆಧಾರವಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ತಿದ್ದುಪಡಿ ಮಾಡುವ ಮೂಲಕ ಅದನ್ನು ಅಸ್ತಿತ್ವ ಕಳೆದುಕೊಳ್ಳುವಂತೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ತನ್ನ ಅನುದಾನ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳ ಮೇಲೆ ತಳ್ಳುವ ಮೂಲಕ ಯೋಜನೆ ಅಸ್ತವ್ಯಸ್ತಗೊಳಿಸುವುದೇ ಕೇಂದ್ರದ ಗುಪ್ತ ಅಜೆಂಡಾ ಎಂದು ಕಿಡಿಕಾರಿದರು.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಪ್ರತಿಭಟನೆಯಲ್ಲಿ AITUC ಜಿಲ್ಲಾ ನಾಯಕರಾದ ಬಿ. ಶೇಖರ್ ಬಂಟ್ವಾಳ, ವಿ. ಕುಕ್ಯಾನ್, ಎಚ್.ವಿ. ರಾವ್, ಸುರೇಶ್ ಕುಮಾರ್ ಬಂಟ್ವಾಳ, ಗೀತಾ ಸುವರ್ಣ ಬಜಾಲ್, ಸಂಜೀವಿ ಹಳೆಯಂಗಡಿ, ಮೀನಾಕ್ಷಿ ಬಜಪೆ, ಕೃಷ್ಣಪ್ಪ ವಾಮಂಜೂರು, ಸುಧಾಕರ ಕಲ್ಲೂರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
CITU ಜಿಲ್ಲಾ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು, ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರವಿಚಂದ್ರ ಕೊಂಚಾಡಿ, ಬಿ.ಕೆ. ಇಮ್ತಿಯಾಜ್, ವಸಂತಿ ಕುಪ್ಪೆಪದವು, ಲೋಲಾಕ್ಷಿ ಬಂಟ್ವಾಳ, ಈಶ್ವರೀ ಬೆಳ್ತಂಗಡಿ, ಜಯಂತಿ ಶೆಟ್ಟಿ, ಜಯಲಕ್ಷ್ಮಿ, ಪ್ರಮೋದಿನಿ ಹಾಗೂ ರೈತ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಶೇಖರ್ ಕುಂದರ್, ವಿಮಾ ನೌಕರರ ಸಂಘಟನೆಯ ಬಿ.ಎನ್. ದೇವಾಡಿಗ ಮತ್ತು ಪ್ರಗತಿಪರ ಚಿಂತಕ ರಮೇಶ್ ಉಳ್ಳಾಲ ಮುಂತಾದವರು ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

😀
0
😍
0
😢
0
😡
0
👍
0
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading