ಗ್ರಾಮದ ಮೈದಾನದಲ್ಲಿ ಸಂಜೆ ಹೊತ್ತಿಗೆ ನಡೆಯುವ ಸ್ಥಳೀಯ ಕ್ರಿಕೆಟ್ ಪಂದ್ಯಗಳು ಕೇವಲ ಆಟವಲ್ಲ — ಅದು ನಮ್ಮ ಯುವಕರ ಬದುಕಿನ ಒಂದು ಪ್ರತಿಬಿಂಬ. ವಾರಪೂರ್ತಿ ಪೈಂಟಿಂಗ್, ವೆಲ್ಡಿಂಗ್, ಮೆಸ್ತ್ರಿ, ಕೂಲಿ ಕೆಲಸ ಮಾಡಿ ಕಳೆಯುವವರು, ವಾರಾಂತ್ಯದಲ್ಲಿ ಕ್ರಿಕೆಟ್, ಜಾತ್ರೆ, ಸ್ನೇಹಿತರ ಜೊತೆ ಸಮಯ ಕಳೆಯುವುದು ಸಹಜ. ಆದರೆ ಈ “ಎಂಜಾಯ್‌ಮೆಂಟ್” ಎಷ್ಟು ಮಟ್ಟಿಗೆ ನಮ್ಮ ಭವಿಷ್ಯಕ್ಕೆ ಬೆಲೆ ಕಟ್ಟುತ್ತಿದೆ ಅನ್ನೋದನ್ನು ನಾವು ಒಮ್ಮೆ ಯೋಚಿಸಬೇಕಾಗಿದೆ.
ಇಂದು ಹಲವಾರು ಯುವಕರು ದಿನ ಕಷ್ಟಪಟ್ಟು ಗಳಿಸುವ ಹಣವನ್ನು, ಕ್ಷಣಿಕ ಸಂತೋಷಕ್ಕಾಗಿ ಖರ್ಚು ಮಾಡುತ್ತಿದ್ದಾರೆ. “ಇವತ್ತು ಮಜಾ ಮಾಡೋಣ, ನಾಳೆ ನೋಡೋಣ” ಅನ್ನೋ ಮನೋಭಾವ ನಿಧಾನವಾಗಿ ಜೀವನದ ದಿಕ್ಕನ್ನು ಬದಲಿಸುತ್ತಿದೆ. ಹಣವಂತರ ಜೀವನಶೈಲಿಯನ್ನು ಅನುಸರಿಸಲು ಹೋಗಿ, ತಮ್ಮ ಸಾಮರ್ಥ್ಯ ಮೀರಿದ ಖರ್ಚುಗಳನ್ನು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.
ಸರಕಾರಿ ಉದ್ಯೋಗದಲ್ಲಿರುವವರಿಗೆ ನಿಯಮಿತ ಸಂಬಳ, ಭದ್ರತೆ ಮತ್ತು ಯೋಜಿತ ಜೀವನ ಸಿಗುತ್ತದೆ. ಆದರೆ ಕೂಲಿ ಕೆಲಸ ಮಾಡುವವರ ಜೀವನದಲ್ಲಿ ಈ ಭದ್ರತೆ ಕಡಿಮೆ. ಆದ್ದರಿಂದ ಅವರು ಹಣದ ಮೌಲ್ಯವನ್ನು ಇನ್ನಷ್ಟು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಏಕೆಂದರೆ, ನಾವು “ಎಂಜಾಯ್” ಮಾಡಿದ ಕ್ಷಣಗಳಿಗೆ ಯಾರೂ ಸಂಬಳ ಕೊಡುವುದಿಲ್ಲ. ಆದರೆ ನಾವು ಮಾಡಿದ ತಪ್ಪು ಖರ್ಚುಗಳ ಬೆಲೆ, ಮುಂದೆ ಸಾಲದ ರೂಪದಲ್ಲಿ ತೀರಿಸಬೇಕಾಗುತ್ತದೆ.
ನಿಜವಾದ ಪ್ರಶ್ನೆ ಇಲ್ಲಿದೆ: ನಾವು ಹಣವನ್ನು ಖರ್ಚು ಮಾಡುತ್ತಿದ್ದೇವಾ. ಅಥವಾ ನಮ್ಮ ಭವಿಷ್ಯವನ್ನು?
ಒಮ್ಮೆ ಜೀವನದಲ್ಲಿ ದೊಡ್ಡ ಖರ್ಚುಗಳು — ಮನೆ, ಆರೋಗ್ಯ, ಕುಟುಂಬದ ಜವಾಬ್ದಾರಿ — ಎದುರಾಗುವಾಗ, ಆಗ ನಾವು ಹಿಂದೆ ಮಾಡಿದ ಅಜಾಗರೂಕತೆ ನೆನಪಾಗುತ್ತದೆ. ಆ ಸಂದರ್ಭ ನಿಮ್ಮ ಜೊತೆಗಾರರು ನಿಮಗೆ ಸಾಲದ ರೂಪದಲ್ಲಯೇ.. ನಿಮಗೆ ಸಹಾಯ ಮಾಡುತ್ತಾರೆ ಹೊರತು.. ನಮ್ಮ ಹಿಂದಿನ ಸಿಹಿ ನೆನಪಿಗೆಂದು ಹಾಗೆ ಹಣ ಕೊಡುವುದಿಲ್ಲ ಅಲ್ವೇ?.. ಮುಂದೆ ಸಾಲವೇ ಒಂದೇ ಪರಿಹಾರವಾಗಿ ಕಾಣುತ್ತದೆ. ಆದರೆ ಸಾಲವು ಸಮಸ್ಯೆಯನ್ನು ಪರಿಹರಿಸುವುದಿಲ್ಲ, ಅದು ಕೇವಲ ಮುಂದೂಡುವುದು.
ಬದಲಾವಣೆ ಎಲ್ಲಿಂದ ಆರಂಭವಾಗಬೇಕು?
ನಿಮ್ಮ ಸಣ್ಣ ಆದಾಯವನ್ನು ಗೌರವಿಸಿ
ವಾರದ ಆದಾಯದಲ್ಲಿ ಸ್ವಲ್ಪವಾದರೂ ಉಳಿಸುವ ಅಭ್ಯಾಸ ಬೆಳೆಸಿ
ನಿಮ್ಮ ಕೌಶಲ್ಯವನ್ನು ಹೆಚ್ಚಿಸುವ ಕಡೆ ಗಮನ ಕೊಡಿ
ಸ್ವಂತ ಉದ್ಯೋಗ ಅಥವಾ ಸೈಡ್ ಬಿಸಿನೆಸ್ ಬಗ್ಗೆ ಯೋಚಿಸಿ
ಸ್ಥಳೀಯ ಕ್ರಿಕೆಟ್ ಆಡೋದು ತಪ್ಪಲ್ಲ. ಸ್ನೇಹಿತರ ಜೊತೆ ಸಮಯ ಕಳೆಯೋದು ತಪ್ಪಲ್ಲ. ಆದರೆ ಜೀವನವನ್ನೇ ಅದಕ್ಕೆ ಸೀಮಿತ ಮಾಡಿಕೊಳ್ಳುವುದು ಅಪಾಯಕರ. ನಿಮ್ಮ ಸಮಯ, ಹಣ, ಶಕ್ತಿ — ಇವೆಲ್ಲವೂ ನಿಮ್ಮ ಭವಿಷ್ಯದ ಬಂಡವಾಳ.
“ಕ್ಷಣಿಕ ಸಂತೋಷಕ್ಕಿಂತ, ಸ್ಥಿರ ಭವಿಷ್ಯವನ್ನು ಆರಿಸೋಣ.”
