Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಮಂಗಳೂರು: ಪ್ರತಿಮೆ ಇಲ್ಲದ ವೃತ್ತ, ಮುಖವಾಡ ಬಿಚ್ಚಿದ ರಾಜಕಾರಣ!

ಮಂಗಳೂರು: ಪ್ರತಿಮೆ ಇಲ್ಲದ ವೃತ್ತ, ಮುಖವಾಡ ಬಿಚ್ಚಿದ ರಾಜಕಾರಣ!

ಡಾ. ಬಿ.ಆರ್. ಅಂಬೆಡ್ಕರ್ ಅವರ ಹೆಸರಿನಲ್ಲಿ ಸರ್ಕಲ್‌ನ್ನು ಅಭಿವೃದ್ಧಿಪಡಿಸುವ ಅಥವಾ ಅಧಿಕೃತವಾಗಿ ನಾಮಕರಣ ಮಾಡುವ ನಿರ್ಧಾರ ಮತ್ತು ಯೋಜನೆ 1994 ರಲ್ಲಿ ಮೊದಲು ತೀರ್ಮಾನಿಸಲಾಯಿತು. ನಂತರ ಬಿಜೆಪಿ, ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಪ್ರತಿಯೊಂದು ಚುನಾವಣೆಗೂ ಮುನ್ನ “ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆ ಸ್ಥಾಪನೆ ಮಾಡುತ್ತೇವೆ” ಎಂಬ ಭರವಸೆಗಳು ಘೋಷಣೆಯಾಗಿವೆ. ಆದರೆ ಅಧಿಕಾರ ಸಿಕ್ಕ ನಂತರ ಆ ಭರವಸೆಗಳು ಕಾಗದದಲ್ಲೇ ಉಳಿಯುತ್ತಿವೆ. ಇದರಿಂದ ಒಂದು ಸಂಗತಿ ಸ್ಪಷ್ಟವಾಗುತ್ತಿದೆ—ಈ ಪಕ್ಷಗಳಿಗೆ ಅಂಬೇಡ್ಕರ್ ಪ್ರತಿಮೆ ಬೇಕಾಗಿಲ್ಲ. ಹಾಗಿದ್ದರೆ, ಅದಕ್ಕಾಗಿ ಹಣ ಮೀಸಲಿಡುವುದಾಗಿ ಹೇಳಿದ್ದು ಯಾಕೆ? ಭರವಸೆ ನೀಡಿದ್ದು ಯಾಕೆ? ಇದು ಕೇವಲ ಮತಗಳಿಗಾಗಿ ಬಳಸಿದ ರಾಜಕೀಯ ತಂತ್ರವೇ ಎಂಬ ಪ್ರಶ್ನೆ ಈಗ ಸಾರ್ವಜನಿಕವಾಗಿ ಕೇಳಿಬರುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಪಕ್ಷಗಳು ಮತ್ತು ರಾಜಕಾರಣಿಗಳು ದಲಿತ ಸಮುದಾಯಕ್ಕೆ ನಿಜವಾದ ಸವಲತ್ತುಗಳನ್ನು ನೀಡಲು ಇಚ್ಛಿಸುವುದಿಲ್ಲ ಎಂಬ ಅನುಮಾನ ದಲಿತ ಹೋರಾಟಗಾರರಲ್ಲಿ ಗಟ್ಟಿಯಾಗುತ್ತಿದೆ. ಕಾರಣ ಸ್ಪಷ್ಟ—ದಲಿತರು ಆರ್ಥಿಕವಾಗಿ, ಬೌದ್ಧಿಕವಾಗಿ ಸಬಲರಾದರೆ ಅವರು ಸ್ವತಂತ್ರ ರಾಜಕೀಯ ಚಿಂತನೆ, ಸ್ವಂತ ಹೋರಾಟಗಳತ್ತ ಮುನ್ನುಗ್ಗುತ್ತಾರೆ. ಅದನ್ನು ಸಹಿಸಲು ರಾಜಕೀಯ ವ್ಯವಸ್ಥೆ ಸಿದ್ಧವಿಲ್ಲ. ಆದ್ದರಿಂದಲೇ ಅಂಬೇಡ್ಕರ್ ಅವರ ಹೆಸರನ್ನು, ಪ್ರತಿಮೆಯನ್ನು ಚುನಾವಣಾ ಸಮಯದಲ್ಲಿ ಮಾತ್ರ ಬಳಸಲಾಗುತ್ತದೆ; ಗೆದ್ದ ಬಳಿಕ ಮರೆತು ಬಿಡಲಾಗುತ್ತದೆ.

ಇನ್ನೊಂದು ಕಡೆ, ದಲಿತ ಸಮುದಾಯದ ಹೆಸರಿನಲ್ಲಿ ದೇವಸ್ಥಾನ, ದೈವಸ್ಥಾನಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಬಾಬಾ ಸಾಹೇಬರ ಸಿದ್ಧಾಂತಗಳು—ಸಮಾನತೆ, ಶಿಕ್ಷಣ, ಸಂವಿಧಾನಾತ್ಮಕ ಹಕ್ಕುಗಳು—ಇವುಗಳ ಬಗ್ಗೆ ಸ್ಪಷ್ಟತೆ ರಾಜಕಾರಣಿಗಳಿಗೆ ಇಲ್ಲದಿರುವುದು ಮತ್ತೊಂದು ದೊಡ್ಡ ಸಮಸ್ಯೆ. ಅಂಬೇಡ್ಕರ್ ಯಾರು, ಅವರು ಏನು ಹೇಳಿದರು, ಏನು ಹೋರಾಡಿದರು ಎಂಬುದನ್ನು ಅರಿಯುವ ಮನಸ್ಸೇ ಇಲ್ಲದಿರುವುದು ಇಲ್ಲಿ ಗೋಚರಿಸುತ್ತದೆ.

ಅಂಬೇಡ್ಕರ್ ವೃತ್ತದ ಪ್ರತಿಮೆ ವಿಚಾರದಲ್ಲಿ ಐದು ವರ್ಷಕ್ಕೊಮ್ಮೆ ಒಂದೊಂದು ‘ಅಪ್ಡೇಟ್’ ಬರುತ್ತದೆ—ಹಣ ಮಂಜೂರು, ನೀಲಿ ನಕ್ಷೆ, ಗುದ್ದಲಿ ಪೂಜೆ, ಅಧಿಕೃತ ಘೋಷಣೆ. ಆದರೆ ಕೆಲಸ ಮಾತ್ರ ಪೂರ್ಣಗೊಳ್ಳುವುದಿಲ್ಲ. ಈ ವೇಗ ನೋಡಿದರೆ, ಇನ್ನೂ ನೂರು ವರ್ಷಗಳಲ್ಲಿ ಅಂಬೇಡ್ಕರ್ ಪ್ರತಿಮೆ ಅಲ್ಲಿ ನಿಂತೀತೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ದಲಿತ ಹೋರಾಟಗಾರರು ಈ ಬಗ್ಗೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸಮುದಾಯದೊಳಗಿನ ದ್ವಂದ್ವ ನಿಲುವು, ರಾಜಕಾರಣಿಗಳ ಕುತಂತ್ರ, ಅಧಿಕಾರಿಗಳ ನಿರ್ಲಕ್ಷ್ಯ ಎಲ್ಲವೂ ಸೇರಿ ಅಂಬೇಡ್ಕರ್ ಪ್ರತಿಮೆಗೆ ಇನ್ನೂ ಜೀವ ಸಿಕ್ಕಿಲ್ಲ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಕೊನೆಯಲ್ಲಿ ಒಂದು ಸತ್ಯವನ್ನು ಒಪ್ಪಲೇಬೇಕು—ಅಂಬೇಡ್ಕರ್ ಪ್ರತಿಮೆ ನಿರ್ಮಾಣವೇ ಅಂತಿಮ ಗುರಿಯಲ್ಲ. ಅವರ ವಿಚಾರಗಳನ್ನು ಸಮಾಜದೊಳಗೆ ವ್ಯಾಪಕವಾಗಿ ಪ್ರಚುರಪಡಿಸುವುದೇ ನಿಜವಾದ ಗೌರವ. ಆದರೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆ ಸ್ಥಾಪನೆ ಆಗದಿರುವುದು, ದಲಿತ ಪರವೆಂದು ಹೇಳಿಕೊಳ್ಳುವ ರಾಜಕಾರಣಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ.

😀
0
😍
0
😢
0
😡
0
👍
3
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading